ಕಾಲ್ಡ್‍ವೆಲ್, ಎರ್ಸ್‍ಕಿನ್ ಪ್ರೀಸ್ಟನ್

1903- ಅಮೆರಿಕದ ಕಾದಂಬರಿಕಾರ. ಜಾರ್ಜಿಯಾದ ವೈಟ್‍ಓಕ್‍ನಲ್ಲಿ ಹುಟ್ಟಿದ. ತನ್ನ ಬಾಲ್ಯವನ್ನು ಹೆಚ್ಚಾಗಿ ದಕ್ಷಿಣಭಾಗದಲ್ಲಿ ಸುತ್ತಾಡಿ ಕಳೆದ. ಅಲ್ಲಿ ಕಂಡುಂಡ ಜೀವನಚಿತ್ರವೇ ಅವನ ಮುಂದಿನ ಬರೆವಣಿಗೆಯ ವಸ್ತುವಾಯಿತು. ಹತ್ತಿಬಿಡಿಸುವನಾಗಿ, ಅಡಿಗೆಯವನಾಗಿ ಕೊನೆಗೆ ಪತ್ರಿಕಾಪ್ರತಿನಿಧಿಯಾಗಿ ಕಾಲ ಕಳೆದು ಜೀವನವನ್ನು ಚೆನ್ನಾಗಿ ಈತ ಅರ್ಥ ಮಾಡಿಕೊಂಡಿದ್ದಾನೆ. ತನ್ನ ಟೊಬ್ಯಾಕೊ ರೋಡ್ (1932) ಕಾದಂಬರಿಯಿಂದ ಪ್ರಸಿದ್ಧನಾದ. ಗಾಡ್‍ಸ್ ಲಿಟ್ಲ್ ಏಕರ್ (1933) ಕಾದಂಬರಿಯಲ್ಲಿ ಕಾಣುವ ಉತ್ತಮ ಹಾಸ್ಯಪ್ರಜ್ಞೆ, ಸಾಮಾಜಿಕ ಭೇದಗಳ ಬಗ್ಗೆ ಉಗ್ರ ವಿರೋಧ, ಜನಜೀವನದ ವಾಸ್ತವಚಿತ್ರಣಗಳು ಸಾಮಾನ್ಯವಾಗಿ ಇವನ ಎಲ್ಲ ಕೃತಿಗಳಲ್ಲೂ ತೋರಿಬರುತ್ತವೆ. ಟ್ರಬಲ್ ಇನ್ ಜುಲೈ (1940), ಎ ಪ್ಲೇಸ್ ಕಾಲ್ಡ್ ಈಥರ್‍ವಿಲ್ (1949) ಎಂಬ ಕಾದಂಬರಿಗಳು ವರ್ಣಸಮಸ್ಯೆ ಕುರಿತಂಥವು. ಕಾಲ್ಡ್ ವೆಲ್ ಸಣ್ಣಕಥೆಗಳಿಗೆ ಹೆಚ್ಚು ಪ್ರಸಿದ್ಧ. ಈತನ ಕೆಲವು ಕಥಾಸಂಗ್ರಹಗಳು ಪ್ರಕಟವಾಗಿವೆ.

 

(ಎನ್.ಎಸ್.ಎಲ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ